ಮತ್ತೆ ಬಂದಿದೆ ಯುಗಾದಿ...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಬೇಂದ್ರೆಯವರ ಈ ಸಾಲುಗಳು ಕಿವಿಗೆ ಬೀಳದೆ ಬೆಳಗಾಗದ ಯುಗಾದಿ ಹಬ್ಬದ ದಿನವೇ ಇಲ್ಲ. ಪರೀಕ್ಷೆಗೂ ಸಹ ಬೆಳಗ್ಗೆ ಬೇಗ ಏಳದವನು, ಈ ದಿನದಂದು ಎದ್ದು ಕುಳಿತು ಬಕಪಕ್ಷಿಯಂತೆ ಈ ಹಾಡನ್ನು ರೇಡಿಯೋದಲ್ಲಿ ಬರುವ ತನಕ ಅಲ್ಲಾಡದಂತೆ ಕೂರಲಿಲ್ಲವೆಂದರೆ ಯುಗಾದಿ ಶುರುವಾಗುತ್ತಲೇ ಇರಲಿಲ್ಲ. ಹಾಡು ಕೇಳಿ, ಮುಗಿಯುವ ತನಕ ಕೊನೆಸಾಲಿನವರೆಗೂ ಜೊತೆಗೆ ಹಾಡಿದ ನಂತರವೇ ಎಣ್ಣೆ ಸ್ನಾನದ ತಯಾರಿ.

ಕುಲವಧು ಚಿತ್ರದ ಹಾಡು, ಮಾವಿನ ತೋರಣ, ಅಭ್ಯಂಜನ, ಬೇವು-ಬೆಲ್ಲ, ಬೇಳೆ ಒಬ್ಬಟ್ಟು - ಇಷ್ಟರಲ್ಲಿ ಯಾವುದೂ ತಪ್ಪುವಂತಿಲ್ಲ. ಪ್ರತಿ ವರ್ಷ ಹೋಳಿಗೆ ತಯಾರಿ ಮತ್ತು ತಿನ್ನುವಾಗ ’ಹೋಳಿಗೆ ಮಾಮ’ನ ಪ್ರಸಂಗವನ್ನು ನೆನೆಯಲೇ ಬೇಕು, ಅದೂ ಕೂಡ ತಪ್ಪುವಂತಿಲ್ಲ. ’ಹೋಳಿಗೆ ಮಾಮ’, ಅವರ ನಿಜವಾದ ಹೆಸರಲ್ಲ. ಅವರ ಹೆಸರೂ ನನಗೆ ಗೊತ್ತಿಲ್ಲ. ನನ್ನ ತಂದೆಯ ಬಳಗದವರು (ಸರಿಯಾದ ಸಂಬಂಧ ನೆನಪಿಲ್ಲ). ಸುಮಾರು ವರ್ಷಗಳ ಹಿಂದಿನ ಮಾತು (೩೦-೩೫ ವರ್ಷಗಳ ಹಿಂದಿನದು), ಪ್ರತಿ ವರ್ಷದಂತೆ ಯುಗಾದಿ ಬಂತು. ’ಹೋಳಿಗೆ ಮಾಮ’ ಆಗ ಮೇಟ್ರಿಕ್ಸ್ ವಿದ್ಯಾರ್ಥಿ. ತುಮಕೂರಿನಲ್ಲಿ ಹಾಸ್ಟೆಲ್‍ನಲ್ಲಿದ್ದುಕೊಂಡು ಓದುತ್ತಿದ್ದರು. ಪರೀಕ್ಷೆ ಹಿಂದಿನ ದಿನವೇ ಯುಗಾದಿ. ಛೇ! ಹೋಳಿಗೆ ತಿನ್ನದೆ ಪರೀಕ್ಷೆ ಬರೆಯುವುದಾದರೂ ಹೇಗೆ? ಸರಿ, ಹತ್ತಿರದಲ್ಲೇ ಇದ್ದ ಊರಿನ ದಾರಿ ಹಿಡಿದರು. ಹಬ್ಬದ ದಿನ ಒಬ್ಬಟ್ಟು ಸೊಗಸಾಗಿತ್ತು, ಹೊಟ್ಟೆ ಬಿರಿಯೆ ತಿಂದರು. ಮಾರನೆ ದಿನ ಹೊಟ್ಟೆಯ ತಕರಾರು ಶುರು, ದಿನವಿಡೀ ಹಿತ್ತಲ ಕಡೆಯ ದಾರಿ ಸವೆಸಿದ್ದೇ ಆಯಿತು. ಜೊತೆಗೆ ಮೆಟ್ರಿಕ್ಸ್ ಗೆ ಕೈ ಮುಗಿದ್ದದ್ದೂ ಆಯಿತು. ಅಂದಿನಿಂದ ಅವರ ಹೆಸರು ’ಹೋಳಿಗೆ’ ಆಯಿತು. ಕೊನೆಗೆ ಅವರಿಗಿಂತ ಚಿಕ್ಕವರ ಬಾಯಲ್ಲಿ ’ಹೋಳಿಗೆ ಮಾಮ’.

ಇಂದು ಯುಗಾದಿ. ಈ ಬಾರಿ ಎಂದಿನ ಸಡಗರ-ಸಂಭ್ರಮಗಳಿಂದ ಸಾವಿರಾರು ಮೈಲಿ ದೂರದಲ್ಲಿ ಕುಳಿತು ಹಿಂದಿನ ದಿನಗಳ ಮೆಲುಕು ಹಾಕುತ್ತಲೆ ಹಬ್ಬದ ಅಚರಣೆ. ಹಾಡನ್ನು ಗುನುಗುನಿಸುತ್ತ, ಹೋಳಿಗೆ ನೆನದು ನೀರೂರಿಸುತ್ತಾ ದಿನ ದೂಡುವುದು...

ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ :)

ಎಲ್ಲರಿಗೂ ಯುಗಾದಿಯ ಶುಭಾಶಯಗಳು

ಕೊಸರು: ಹಾಡಿನ ಸಾಹಿತ್ಯ ಬೇಕಿದ್ದರೆ ಇಲ್ಲಿ ಇಣುಕಿ. ಹಾಡು ಕೇಳಲಿಕ್ಕೆ/ನೋಡಲಿಕ್ಕೆ ಯುಟ್ಯೂಬ್‍ಗೆ ಧಾವಿಸಿ.

Posted by Prashanth M 2:01 AM  

1 Comment:

  1. Susheel Sandeep said...
    ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು, ಅಖಿಲ ಜೀವ ಜಾತಕೆ
    ಒಂದೆ ಒಂದು ಜನ್ಮದಲ್ಲಿ, ಒಂದೆ ಬಾಲ್ಯ ಒಂದೆ ಹರೆಯ, ನಮಗದಷ್ಟೆ ಏತಕೋ..?

    ಅಡಿಗರ 'ಇರುವುದೆಲ್ಲವ ಬಿಟ್ಟು...' ಬಿಟ್ರೆ next best lines from a poem used in kannada movies.

    ಯುಗಾದಿ ಹಬ್ಬದ ಶುಭಾಶಯಗಳು :)

Post a Comment