ನಾನೇಕೆ ಬರೆಯಲಿ?

ನಾನೇಕೆ ಬರೆದು ಹೇಳಬೇಕು ನಿನಗೆ?

ನಿನಗೆ ತಿಳಿಯಹೇಳಲು ...
ನನಗೆ ಬರೆಯುವುದೇ ದಾರಿಯೆ?

ಎನ್ನ ಎದೆಯಾಳದ ಭಾವವ ತಿಳಿಯದಿರಲು
ನೀನೇನು ಕಲ್ಲಿನ ಮೂರ್ತಿಯೆ?

ತಾಯಿ ತನ್ನ ಮಗುವಿಗೆ ಪ್ರೀತಿಯನ್ನು ಬರೆದು ತಿಳಿಸುವಳೆ?
ಇಲ್ಲ. ಆಕೆ ತನ್ನ ಭಾವವನ್ನು ಮಮತೆಯನುಣಿಸಿ ಪ್ರಕಟಿಸುವಳು.

ದುಂಬಿಯೊಂದು ಹೂವಿಗೆ ಬರೆದು ತಿಳಿಸುತ್ತದೆಯೆ ತನ್ನ ಪ್ರೇಮವನ್ನು?
ಇಲ್ಲ. ಅದು ಬರಿಯ ಝೇಂಕಾರದಿಂದ ಪ್ರಕಟಿಸುತ್ತದೆ ತನ್ನ ಆಗಮನವನ್ನು.

ಬತ್ತಿಯು ಬೆಳಕಿಗೆ ಬರೆಯುವುದೇ ತನ್ನೊಲುಮೆ ಸಾರಲು?
ಇಲ್ಲ. ಅದು ತಾನೇ ಉರಿದು ಬೆಳಕಿನೊಡಗೂಡುವುದು!

ಹಾಗಾದರೆ ನಾನೇಕೆ ಬರೆಯಲಿ, ನನ್ನೊಲುಮೆ ತೋರಲು?
ನನಗೆ ಬರೆಯುವುದೊಂದೇ ದಾರಿಯೇ?

ನನ್ನ ಎದೆಯಾಳದ ಭಾವವ ತಿಳಿಯದಿರಲು
ನೀನೇನು ಕಲ್ಲಿನ ಮೂರ್ತಿಯೆ?

Inspiration : Rakesh's Hindi poem

Posted by Srik 3:42 PM 2 ಅನಿಸಿಕೆಗಳು  ಕಂಡಿದ್ದು ಕೇಳಿದ್ದು ೩

ಆತ: ಏನೋ ತಲೇನಲ್ಲಿ ಇಷ್ಟೊಂದು ಬಿಳೀ ಕೂದಲು. ಬೇಗ ಮದುವೆ ಅಗಿಬಿಡೊ.

ಈತ: ಯಾಕೆ ಮದುವೆ ಆದ ತಕ್ಷಣ ಬಿಳಿ ಕೂದಲೆಲ್ಲ ಮತ್ತೆ ಕಪ್ಪಗಾಗಿಬಿಡತ್ತಾ? :p

Posted by Prashanth M 2:40 PM 1 ಅನಿಸಿಕೆಗಳು  ಚುಟುಕ

ಬರೆಯಲೆಂದು ಕುಳಿತೆ
ನನ್ನ ಬಾಳ ಚರಿತೆ
ಅಳೆದು-ಸುರಿದು ಗೀಚಿದಾಗ ಆದುದಿಷ್ಟೆ
ಎರಡು ಹಾಳೆಯಷ್ಟು ಅಳತೆ


*ಚುಟುಕ ಗೀಚುವತ್ತ ಒಂದು ಪ್ರಯತ್ನ

Posted by Prashanth M 5:18 PM 4 ಅನಿಸಿಕೆಗಳು  ಕಂಡಿದ್ದು ಕೇಳಿದ್ದು ೨

ಮಾತು ಮನೆ ಕೆಡಿಸ್ತು,
ತೂತು ಒಲೆ ಕೆಡಿಸ್ತು,
ಬ್ಲಾಗು ಕೆಲಸ ಕೆಡಿಸ್ತು

Posted by Prashanth M 1:57 PM 6 ಅನಿಸಿಕೆಗಳು  ಕಂಡಿದ್ದು ಕೇಳಿದ್ದು

ನಮ್ಮ ನಿತ್ಯ ದಿನ ಜೀವನದಲ್ಲಿ ತಮಾಷೆಯಾಗಿರುವಂತಹ, ಮುಜುಗರ ನೀಡುವಂತಹ ಸನ್ನಿವೇಶಗಳು ಬಹಳಷ್ಟು. ಅದು ನಡೆದು ಎಷ್ಟೋ ದಿನಗಳ ನಂತರ ಅದನ್ನ ಜ್ಞಾಪಿಸಿಕೊಂಡರೆ ಹಿಂದಿನ ದಿನಗಳ ನೆನಪುಗಳು ಅಲೆ-ಅಲೆಯಾಗಿ ಬರುತ್ತವೆ.

ಕಳೆದು ಹೋದ ಘಟನೆಗಳ, ಎಲ್ಲೋ ಕೇಳಿದ, ಕಂಡ, ನಗೆ ತರಿಸುವ ಸನ್ನಿವೇಶಗಳನ್ನು ಹಂಚಿಕೊಳ್ಳುವ ಪ್ರಯತ್ನ ಇದು. ನಿಮ್ಮ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆದಿದ್ದರೆ, ಬನ್ನಿ ನೀವು ಹಂಚಿಕೊಳ್ಳಿ.


ಈ ಘಟನೆ ನನ್ನ ಗೆಳೆಯ/ಹಳೆಯ ಕಂಪೆನಿ ಸಹೋದ್ಯೋಗಿ ವಿಕ್ರಮ್ ಹೇಳಿದ್ದು. ಅವನ ಶಾಲಾ ದಿನಗಳಲ್ಲಿ ನಡೆದ ಘಟನೆ - ೫-೬ನೇ ತರಗತಿಯಿರಬಹುದು. ಒಂದು ಸಂಜೆ ಶಾಲೆಯಿಂದ ಹಿಂದಿರುವಾಗ ಅವನು ಮತ್ತು ಗೆಳೆಯರ ಗುಂಪು ಮನೆ ದೂರವಿದ್ದುದರಿಂದ ಒಂದು ಕಾರಿಗೆ ಕೈ ತೋರಿಸಿ ಲಿಫ಼್ಟ್ ಕೇಳಿದರು. ಇವರು ಸುಮಾರು ೬-೭ ಹುಡುಗರಿದ್ದರು. ಕಾರಿನವರು ಗಾಡಿ ನಿಲ್ಲಿಸಿ ಎಲ್ಲರನ್ನೂ ಹತ್ತಿಸಿಕೊಂಡು ಹೊರಟರು. ಸ್ವಲ್ಪ ದೂರ ಹೋದ ಮೇಲೆ ಕಾರಿನವರು ಸುಮ್ಮನೆ ಎಚ್ಚರಿಸಲೋಸುಗ ಕೇಳಿದರು "ಲೋ ಮಕ್ಕಳ್ರಾ, ನಿಮಗೆ ಕಿಡ್ನಾಪ್ ಅಂದ್ರೆ ಗೊತ್ತಾ?". ಅದಕ್ಕೆ ಒಬ್ಬ ತಟಕ್ಕನೆ ಪ್ರತಿಕ್ರಿಯಿಸಿದ "ಅಂಕಲ್, ನಿಮಗೆ ಹೈಜಾಕ್ ಅಂದ್ರೆ ಗೊತ್ತಾ?". ಮುಂದೆ ಅವರೆಲ್ಲರು ಇಳಿಯುವ ತನಕ ಕಾರಿನವರು ಗಪ್‍ಚಿಪ್. :)

Posted by Prashanth M 6:13 PM 2 ಅನಿಸಿಕೆಗಳು  ಮಾತನಾಡಲೂ ಅವಳು ಮಾಯವಾದಳು...

ಕೆಲವು ಹಾಡುಗಳನ್ನ ಬಹಳ ದಿನಗಳ ನಂತರ ಕೇಳಿದರೆ ಏನೋ ಮನಸ್ಸಿಗೆ ಒಂದು ತರಹ ಖುಷಿಯಾಗುತ್ತೆ. ನಿನ್ನೆ ಹೀಗೇ ಆಯ್ತು. ನನ್ನ ಗೆಳೆಯ ಬಚೋಡಿ ಒಂದು ಹಾಡಿನ ಜಾಡು ಹಿಡಿದು ಹುಡುಕಾಡ್ತಾ ಇದ್ದ. ನಾನೂ ಅದನ್ನ ಕೇಳಿ ಬಹಳ ದಿನಗಳಾಗಿದ್ದವು. ಮಾಡುತ್ತಿದ್ದ ಕೆಲಸ ಬಿಟ್ಟು ನನ್ನ ಹುಡುಕಿ-ತಡಕಾಡಿ ಕೊನೆಗೂ ಕೇಳುತ್ತ ಕುಳಿತೆ. ಆಗ ಆದ ಮನೋಲ್ಲಾಸಕ್ಕೆ ಎಣೆಯೇ ಇಲ್ಲ.

ನೀವೂ ಕೇಳಿ ಆನಂದಿಸಿ - ಹಾಡು ಸಿಬಿಐ ಶಂಕರ್ ಚಿತ್ರದ್ದು -

ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ
ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ
ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ
ಮಾತನಾಡಲೂ ಅವಳು ಮಾಯವಾದಳು...
ಹಾಡಿನ ಸಾಲುಗಳು ಅಸಂಬದ್ಧವಾದರೂ, ಸಂಗೀತ ಚೆನ್ನಾಗಿದೆ.

Posted by Prashanth M 8:24 PM 3 ಅನಿಸಿಕೆಗಳು  ಕೊರತೆಯೆ? ಎನಗೆ?

ಕೊರತೆ ಒಂದಿಲ್ಲ
ಓ!! ಶೃತಿಯು ಸ್ತುತಿಗೈದ ಭಗವನ್,
ಕೊರತೆ ಒಂದೂ ಇಲ್ಲ.
ಕೊರತೆ ಒಂದೂ ಇಲ್ಲ ಓ ಗೋವಿಂದಾ..

ಕಣ್ಣಿಗೆ ಕಾಣದೊಲ್ ನಿಂತಿರುವೆ ಓ! ಕೃಷ್ಣಾ
ನೀಂ ಕಣ್ಣಿಗೆ ಬೀಳದೊಡೆ ಯೇನ್? ಎನಗೆ
ಕೊರತೆ ಒಂದೂ ಇಲ್ಲ.

ಬೇಡಿದೆಲ್ಲಮುಂ ಈವ ವೆಂಕಟೇಶ ನೀನಿರಲು
ಬೇಡಿಕೆ ಎನದು ಏನಿರ್ಪುದಯ್ಯಾ?
ಓ!! ಶೃತಿಯು ಸ್ತುತಿಗೈದ ಭಗವನ್,
ಬೆಟ್ಟವೇರಿ ನಿಂತ ಓ! ಗೋವಿಂದಾ!!
ಎನಗೆ ಒಂದೂ ಕೊರತೆ ಇಲ್ಲಯ್ಯಾ.

ತೆರೆಯ ಮರೆಯೊಳ್ ನಿಂತಿರುವೆ ಅಯ್ಯಾ ನೀನು
ವೇದವ ಬಲ್ಲ ಜ಼ಾನಿಗಳುಂ ಮಾತ್ರಮೇ ನಿನ್ನ ಕಾಣ್ಪಾರು
ದರುಶನಮಾಗದೊಡೆ ಏನ್, ಎನಗೆ
ಕೊರತೆಯೆ? ಒಂದಿಲ್ಲಾ!!
ಓ! ಎಲ್ಲ ಬಲ್ಲಾತ ಭಗವಂತ ಗೋವಿಂದ ನೀನಿರಲ್
ಕೊರತೆಯೆ? ಎನಗೆ?

ಬೆಟ್ಟವನೇರಿ ನೀ ನಿಂತೆ ಅಯ್ಯಾ..
ಕಲ್ಲಾಗಿ ನಿಂತೆ
ನೀಂ ಬೆಟ್ಟಮೇರಿ ಕಲ್ಲಾಗಿ ನಿಂತೊಡೆ
ಎನಗೆ ಏನ್? ಕೊರತೆ ಒಂದೂ ಇಲ್ಲಾ!!

ಕಲಿಯುಗದೊಳ್ ಕಲ್ಲಾಗಿ ನೆಲೆಸಿದೆ
ದೇವಾಲಯದೊಳ್ ಬಂಧಿಯಾದೆ.
ಹೀಗಾದರೂ ಎನಗೆ ಒಂದೂ ಕೊರತೆಯಿಡದೆ
ನೀಗಿಸಿದೆ.

ಭಕ್ತರ ಬಂಧವ ನೀಗಿಸೋ ಪರಮಾತ್ಮ.
ನೀಂ ಯೆಂತು ಬೇಡಿಕೆ ತಿರಸ್ಕಾರಮಂ ಮಾಳ್ಪೆ?
ನಿನ್ನ ಹೃದಯದೊಳ್ ನೆಲೆಸಿರ್ಪಳ್ ಆ ಕರುಣೆಯ ಕಡಲ್
ಎನ್ನಾ ಮಾತೆ ಲಕುಮಿ

ಇಂತಿರಲ್ ನನಗೆ ಯೇಂ ಕೊರತೆ? ಚಿಂತೆ? ಬೇಸರಿಕೆ?
ಒಂದೂ ಇಲ್ಲ!!
ಓ! ಶೃತಿಯು ಸ್ತುತಿಗೈದ ಭಗವನ್,
ಗೋವಿಂದಾ! ವೆಂಕಟೇಶಾ! ಕರುಣಾ ಸಾಗರ!!
ಕೊರತೆ ಎನಗಿಲ್ಲಯ್ಯಾ!!

Posted by Srik 2:44 PM 1 ಅನಿಸಿಕೆಗಳು  ಇತಿಹಾಸದ ಆ ಒಂದು ದಿನ

ನಾನಂದು ಆ ರಸ್ತೆಯಲ್ಲಿ ನಡೆದಾಡುತ್ತಿದ್ದೆ......
ನನಗೆ ಕೇಳಿಸಿತು, "ಇಲ್ಲಿ ಬನ್ನಿ! ಮುತ್ತು ತೊಗೊಳ್ಳಿ... ಸೇರಿಗೆ ನಾಲ್ಕು ಕಾಸು!!!"
"ಈ ಕಡೆ ಬನ್ನಿ ಸ್ವಾಮಿ.. ಮೂರು ಕಾಸಿಗೆ ಬಂಗಾರ ಒಂದು ಸೇರು!!"

ಆ ರಸ್ತೆ ಜೀವನೋತ್ಸಾಹದಿಂದ ತುಂಬಿದ್ದಿತು....ಕಲರವದಿಂದ ಕೂಡಿದ್ದಿತು....ಜನರಿಂದ ತುಳುಕಿದ್ದಿತು.
ಜನರು ಅಲ್ಲಿ ಬಂಗಾರ ಕೊಳ್ಳುತ್ತಿದ್ದರು...ವಜ್ರ ವೈಡೂರ್ಯ್ಗಳನ್ನು ಕೊಳ್ಳುತ್ತಿದ್ದರು..ಮುತ್ತು ರತ್ನ ಪಚ್ಚೆ ಅಲ್ಲಿ ರಾಶಿ ರಾಶಿ ಬಿದ್ದಿದ್ದವು.. ಆ ಮಾರುಕಟ್ಟೆಯು ಸಾಮಾನ್ಯ ಜನರಿಂದ ತುಂಬಿದ್ದಿತು.. ಮಾರಾಟಗಾರರು ಸಾಮಾನ್ಯ ಜನರೆ...ಕೊಳ್ಳುತ್ತಿದ್ದವರೂ ಸಹ ಅಸಾಮಾನ್ಯರೇನಲ್ಲ!!! ಎಲ್ಲರೂ ಎರಡು ಹೊತ್ತಿನ ಕೂಳಿಗಾಗಿ ಕಷ್ಟಪಟ್ಟು ದುಡಿಯುವವರೇ...ಈ ಲೋಹಗಳ ಮಾರಾಟ ಮತ್ತು ಕೊಳ್ಳುವಿಕೆಯು ಅವರ ಜೀವನದ ಅವಿಭಾಜ್ಯ ಅಂಗ.

ಇಷ್ಟೆಲ್ಲಾ ಸಂಪತ್ತು ಕಣ್ಣೆದುರಿಗಿದ್ದರೂ ಯಾರ ಮೊಗದಲ್ಲೂ ಕಪಟವೇ ದುಗುಡವೇ ಭಯವೇ ಇರಲಿಲ್ಲ...ಅವರನ್ನು ಕಾಯಲು ಯಾವ ಆರಕ್ಷಕನೂ ಅಲ್ಲಿ ಇರಲಿಲ್ಲ...ಅದು ಒಂದು ಮಾರುಕಟ್ಟೆ ಸಂತೋಷವಾದಂಥದ್ದು...ಸುಭಿಕ್ಷವಾದುದು...ಸುಮನೋಹರವಾದುದು....

ನನ್ನ ಕಣ್ಣುಗಳನ್ನು ನನಗೇ ನಂಬಲಸದಳವಾಗಿತ್ತು ಆ ಕ್ಷಣ... ನಾನು ಸ್ವರ್ಗದಲ್ಲಿ ತೇಲಾಡಿದಂತಿತ್ತು ಆ ಅನುಭವ..!

ಇದ್ದಕ್ಕಿದ್ದಂತೆ...ಜನರು ಓಡಲು ಶುರುಮಾಡಿದರು....ಕುದುರೆಗಳ ಕೆನೆತ ಕೇಳಿಬಂತು...ಆನೆಗಳು ಘೀಳಿಡಲಿಕ್ಕಿದವು... ಹೆಂಗಸರು...ಮಕ್ಕಳು...ಮುದುಕರು ಎಲ್ಲಾ ಚೆಲ್ಲಾಪಿಲ್ಲಿಯಾಗಿ ಓಡಹತ್ತಿದರು. ಆ ಒಂದೇ ಕ್ಷಣದ ಪಲ್ಲಟ ಇಂತಹ ಸ್ಥಿತಿ ತಂದೊಡ್ಡಿತ್ತು...ಬಿಗುವಾದ ವಾತಾವರಣ ಹರಡಿತ್ತು ಆ ಕ್ಷಣ.. ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು... ಎಲ್ಲರಲ್ಲೂ ಆತಂಕ ಮನೆಮಾಡಿತ್ತು..

ಮಾರಾಟಗಾರರು ಒಂದೇ ಕ್ಷಣದಲ್ಲಿ ಮೃತ್ಯುಕೂಪಕ್ಕೈದಿದರು... "ತೊಗೊಳ್ಳಿ...." "ಬನ್ನಿ..." ಎಂಬ ಶಬ್ಧಗಳು ಮರೆಯಾದವು... ಇದ್ದಕ್ಕಿದ್ದಂತೆಯೇ ಆ ಮಾರುಕಟ್ಟೆ ಸ್ಮಶಾನ ರೂಪತಳೆದಿತ್ತು... ವಜ್ರ ವೈಢೂರ್ಯಗಳ ರಾಶಿ ರಸ್ತೆಯಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು...

ಕೆಲವರು ತಮ್ಮ ತಮ್ಮ ಪ್ರಾಣ ರಕ್ಷಣೆಗೊಸ್ಕರ ಓಡುತ್ತಿದ್ದರು...ಅವರನ್ನೆಲ್ಲಾ ಅಟ್ಟಿಸಿಕೊಂಡು ಬಂದು ವೈರಿಗಳು ರಕ್ತದ ಮಡುವಿನಲ್ಲಿ ನೂಕಿದರು...ದಯೆಯಿಲ್ಲದಂತೆ ರಕ್ತವನ್ನು ಆ ರಸ್ತೆಯಮೇಲೆ ಚೆಲ್ಲಾಡಿದರು...

"ಹೇ ಶಂಭೋ!!" "ಪರಮೇಶ್ವರಾ!!" "ದಯಾಸಿಂಧೋ!!" ಎಂಬ ಆರ್ತನಾದ ತುಂಬಿತ್ತು ಆ ರಸ್ತೆಯಲ್ಲಿ ಆ ಕ್ಷಣ.. ಈ ಮಾರಣವೆಂಬ ರುದ್ರ ನರ್ತನ ನನ್ನ ಕಣ್ಣೆದುರಲ್ಲೇ ನಡೆಯುತ್ತಿತ್ತು....ಅತಿ ಕ್ಷಿಪ್ರಗತಿಯಲ್ಲಿ...

ಆ ಧಾಳಿಕೋರರು ಮುಂದೆ ನಡೆಯುತ್ತಾ ನನ್ನೆಡೆಗೆ ಧಾವಿಸುತ್ತಿದ್ದರು...ನನ್ನ ಬಳಿಗೆ ಬಂದೇ ಬಿಟ್ಟರು...ಒಬ್ಬನ ರಕ್ತಸಿಕ್ತ ಖದ್ಗ ನನ್ನ ಕೈಯನ್ನು ತಟ್ಟಿಯೇ ಬಿಟ್ಟಿತ್ತು. "ಹೇ ಭಗವಂತಾ!!" ಎಂದು ಕೂಗಿಕೊಂಡ ನಾನು ಕಣ್ಣುಮುಚ್ಚಿದೆ.

ಕಣ್ಣು ತೆರೆದಾಗ....
ಧಾಳಿಕೋರರ ಸುಳಿವಿಲ್ಲ... ಮಾರುಕಟ್ಟೆ ಎದುರಿನಲ್ಲಿಲ್ಲ... ಮಾರಾಟಗಾರರು ಒಬ್ಬರೂ ಇಲ್ಲ...ಕೊಳ್ಳುವವರು ಮೊದಲೇ ಇಲ್ಲ.. ಇಡೀ ರಸ್ತೆಯೇ ಶೂನ್ಯಮಯ ವಾತಾವರಣ ಹೊಂದಿತ್ತು...ಬಂಗಾರವಿಲ್ಲ... ವಜ್ರದ ಪರಿವಿಲ್ಲ...ಮುತ್ತು ರತ್ನಗಳ ರಾಶಿಯೂ ಇಲ್ಲ... ರಕ್ತದೋಕುಳಿ ಸಹಾ ಅಲ್ಲಿ ಕಾಣಿಸಲಿಲ್ಲ...ನಿಃಶಬ್ಧ.. ನೀರವ... ಮೌನ..

ಎರಡು ಕ್ಷಣಗಳ ಹಿಂದೆ ಇದ್ದ ಜಂಗುಳಿ ಅಲ್ಲಿಲ್ಲ... ಒಂದು ಕ್ಷಣದ ಹಿಂದೆ ಇದ್ದ ಕ್ರೂರ ಬರ್ಬರತೆಯೂ ಅಲ್ಲಿಲ್ಲ...ಇಡೀ ಸ್ಥಳ ಒಂದು ಮೂಕ ಪ್ರೇಕ್ಷಕವಾಗಿ ನಿಂತಿದ್ದಿತು... ನೀರವತೆಯ ಸಾಕಾರ ಮೂರ್ತವಾಗಿದ್ದಿತು...ಆ ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳ ಕಂಭಗಳನ್ನು ಸೀಳಲಾಗಿತ್ತು...ಎಷ್ಟು ಸಾಧ್ಯವೋ ಅಷ್ಟನ್ನು ಮುರಿಯಲ್ಪಡಲಾಗಿತ್ತು... ಧಾಳಿಕೋರರು ಇನ್ನೂ ಹೆಚ್ಚು ಹಾನಿ ಮಾಡಲು ಸಧ್ಯವಾಗದುದಕ್ಕೆ ಆ ರಸ್ತೆಯ ವಿಸ್ತೀರ್ಣವೇ ಕಾರಣ ಇರಬಹುದು... ಅದು ನಿರ್ದಿಗಂತವಾಗಿ...ಉತ್ಪ್ರೇಕ್ಷೆಗೆ ಸಿಲುಕದ್ದಾಗಿ ನಿಂತಿದ್ದಿತು...ಕೆಲವು ಅಂಗಡಿಗಳು ಅದೇ ರೀತಿಯಲ್ಲಿ ನಿಂತಿದ್ದವು... ಕೆಲವು ಅರ್ಧ ಶಿಥಿಲಗೊಳಿಸಲ್ಪಟ್ಟಿದ್ದವು...ಶಿಥಿಲವಾದರೂ ನಿಂತು ತಮ್ಮ ಹೃದಯ ವಿದ್ರಾವಕ ಕಥೆಯನ್ನು ನೋಡುಗರಿಗೆ ಸಾರುತ್ತಿದ್ದವು....
ನಾನು ಈ ದೃಷ್ಯ ನೋಡಿ ಕೋಪಗೊಂಡೆ...ನಿರ್ವಿಣ್ಣನಾದೆ....ಕಣ್ಣೀರನ್ನು ಸುರಿಸಿದೆ... ನಾನು ಬದುಕಿದ್ದೆ...ಆದರೆ ನನ್ನ ಜೀವನೋತ್ಸಾಹ ಇಂಗಿತ್ತು... ಆ ಮನೋಗ್ನತೆಯ ವಿರಾಟ್ ಸ್ವರೂಪದ ಧ್ವಂಸ ನನ್ನೆದುರಿಗೇ ಸಂಭವಿಸಿತ್ತು... ನನ್ನನ್ನು ನಿಸ್ಪೃಹಗೊಳಿಸಿತ್ತು...

ನನ್ನ ಹೃದಯ ಕ್ರೂರ ದೈತ್ಯರ ಅಟ್ಟಹಾಸದ ವಿಜಯದಿ ಕೊಚ್ಚಿ ಹೋಗಿತ್ತು...

ಅವರಿಗೆ ಈ ಮಹಿಮಾಪೂರಿತ ಸ್ಥಳವನ್ನು ಒಡೆಯಲು ಮನಸ್ಸಾದರೂ ಹೇಗೆ ಬಂದಿರಬೇಡ...ಕ್ರೂರ ಮೃಗಗಳಂತೆ... ಹೀನ ರಕ್ಕಸರಂತೆ ಬಹು ಜನರ ಬಹು ದಿನಗಳ ಕನಸಾಗಿದ್ದ ಈ ಮಾರುಕಟ್ಟೆಯನ್ನು ಮುರಿದಿದ್ದರು... ಈ ಸ್ವರ್ಗ ಸೇಮೆಯ ಅಂದವನರಿಯದ ಕಣ್ಣುಗಳು ಇದನ್ನು ನಾಶಮಾಡಲು ಆದೇಶಿಸಿದ್ದವು... ಅವಶೇಶಗಳಡಿಯಲ್ಲಿ ನೂರಾರು ಮುಗ್ಧ ಜೀವಿಗಳ ಆರ್ತತೆ ನನ್ನ ಕಣ್ಣನ್ನು ಕುಕ್ಕಿತ್ತು..ಈ ನರ್‍ಅಮೇಧ ನನ್ನನ್ನು ಚಕಿತಗೊಳಿಸಿತ್ತು...ನಿಷ್ಕ್ರಿಯಗೊಳಿಸಿತ್ತು...ಘಾಬರಿಗೊಳೊಸಿತ್ತು...ಮೂಕತೆಗೆ ದೂಡಿತ್ತು... ಕಣ್ಣೀರು ಆರಿ ಹೋಗುವನಕ ನಾನು ಗೋಳಾಡಿದೆನು... ನಂತರ ತಿಳಿಯಿತು.... ಕಣ್ಣೆದುರು ನಾಶವಾದ ಸಂಪತ್ತು ಈಗ ಇತಿಹಾಸ...ಅದನ್ನು ಒಪ್ಪಿಕೊಂಡು ಮುಂದೆ ಸಾಗಬೇಕಾದುದೇ ನಮಗುಳಿದ ಒಂದೇ ದಾರಿ...!

ಈ ಸ್ಥಳ ಈಗ ಒಂದು ಪಾಳು ಭೂಮಿ... ಹಳೆಯ ವೈಭವದ ನೆನಪಿನ ಕುರುಹಾದ ರುದ್ರ ಭೂಮಿ...ಒಡೆದ ಕಂಭಗಳ ಹಿಂದಿನ ಹೃದಯ ವಿದ್ರಾವಕ ಕಥೆಗಳ ಆಗರ...ಅಷ್ಟೆ.... ಇದರೊಂದಿಗೇ ನಮ್ಮ ಬದುಕು... ಇದೇ ಇಂದಿಗೆ ಉಳಿದ ಸತ್ಯ ಎಂಬುದು ನನಗೆ ಮನವರಿಕೆಯಾಯಿತು...

ಸ್ನೇಹಿತರೆ,
ನಾನಂದು ವೈಭವ ವಿಜಯನಗರದ ರಾಜಧಾನಿ ಹಂಪಿಯ ವಿಜಯ ವಿಟ್ಠಲ ಬಝಾರದಲ್ಲಿ ಅಡ್ಡಾಡುತ್ತಿದ್ದೆ... ಆಗ ನನ್ನ ಮನಸಿನಲ್ಲಿ ಸುಳಿದಾಡಿದ ಭಾವನೆಗಳ ಪದಸರೂಪ ಈ ಲೇಖನ...

ನಮಗೆ ಆ ಹಂಪಿಯ ಬಝಾರದ ವಿವರಣೆ ಕೇಳುವುದೇ ಒಂದು ಸಂತೋಷದ ಸ್ಥಿತಿಯಾಗಿದ್ದಿತು... ಆದರೆ ಆ ಕುರೂಪ ಬಝಾರದ ದರ್ಶನ ನಮ್ಮನ್ನು ಖಿನ್ನರನ್ನಾಗಿಸದೆ ಬಿಡದು... ವಿಜಯನಗರದ ಎಂದೂ ಮುಗಿಯದ ಕಣ್ಣೀರ ಕಥೆ ನಮ್ಮನ್ನು ಘಾಸಿಗೊಳಿಸದೇ ಬಿಡದು!! ವಿಗ್ರಹಗಳ ಭಂಜನೆಯಲ್ಲಿ...ಗೋಪುರಗಳ ಪಳಕೆಯಲ್ಲಿ ನಮ್ಮ ವೈಭವ ಕಳೆದು ಹೋದಂತೆ ಕಾಣಿಸದೆ ಬಿಡದು... ಭಾರತದ ಹೊಸ ಆಚಾರಹೀನತೆಯಾದ ಜಾತ್ಯಾತೀತತೆಯ ಲೇವಡಿಯಂತೆ ಭಾಸವಾಗುವ ಹಂಪಿಯ ಕರಾಳ ಧ್ವಂಸ ನಮ್ಮನ್ನು ಕೆರಳಿಸದೇ ತೊರೆಯದು...

ಈ ಅಮಾನವೀಯ ಹಿಂಸಾಪೂರಿತ ಅಧ್ಯಾಯ ನಮ್ಮ ಇತಿಹಾಸದಲ್ಲಿಲ್ಲದೇ ಇದ್ದಿದ್ದರೆ....ಇಂದು ನಾವು ಆ ಸ್ವತಂತ್ರ ಸ್ವರ್ಗದಲ್ಲಿ ನಲಿದಾಡುತ್ತಿರಬಹುದಿತ್ತು...

ಎಲ್ಲಿ ಮನವು ನಿರ್ಭಯದಿ ತಲೆಯೆತ್ತಿ ನಿಲುವುದೊ...
ಎಲ್ಲಿ ಜ್ನಾನ ಸುಧಾಪೂರ್ಣ ಎಲ್ಲರಿಗೂ ಸಿಗುವುದೋ....

ಆ ಸ್ವತಂತ್ರ ಸ್ವರ್ಗಕೆ.... ಓ ಭಗವಂತಾ... ನಮ್ಮ ನಾಡು ಏಳಲಿ.... ಮತ್ತೆ ಏಳಲಿ....!!
(ರಾಷ್ಟ್ರಕವಿ ಕುವೆಂಪು ಅವರಿಗೆ ನಮಿಸುತ್ತಾ..)

ಹಂಪಿಯ ಕಟ್ಟಿದ ಆ ಕೈಗಳಿಗೆ ನನ್ನ ನಮನ...
ರಸಾನುಭೂತಿಗೆ ಶಿಲಾರೂಪಕೊಟ್ಟ ಆ ಮನುಜರಿಗೆ ನನ್ನ ನಮನ...
ಬುದ್ದಿಮತ್ತೆ ಮತ್ತು ಔಪಾಸನೆಗೆ ರೂಪು ರೇಷೆಯಿತ್ತ ಆ ತಾಂತ್ರಿಕತೆಗೆ ನನ್ನ ನಮನ...
ಎಲ್ಲರಿಗೂ ಇಂದಿಗೂ ಪ್ರೀತಿಯ ಸುಧೆ ಉಣಿಸುತ್ತಿರುವ ತುಂಗೆ-ಭದ್ರೆ ತಾಯಿಗೆ ನನ್ನ ನಮನ...
ಪಾಪಿ ಕಟುಕರನ್ನೂ ಕರುಣೆಯಿಂ ಕಾದ ವಿರೂಪಾಕ್ಷ-ಭುವನೇಶ್ವರಿ ಜನಕರಿಗೆ ನನ್ನ ನಮನ...


ಹಂಪಿ ಸತ್ಯ, ಹಿಂಸೆ, ಕ್ರೂರತೆಗಳ ಪ್ರತೀಕವಾಗಿ ಇಂದು ನಮ್ಮೆದುರಿನಲ್ಲಿದೆ... ನಾವೆಲ್ಲ ಇಲ್ಲಿಂದ ಸತ್ಯವನ್ನರಿತು ಹಿಂತಿರುಗೋಣ... ಮತ್ತೊಮ್ಮೆ ಬಝಾರದ ಶಬ್ಧಗಳನ್ನು ನಿರ್ಭೀತವಾಗಿಸೋಣ...

ಜೈ ಹಿಂದ್.

ಇದೇ ಕಥೆಯ ಆಂಗ್ಲ ರೂಪಾಂತರ ಇಲ್ಲಿದೆ

Posted by Srik 2:06 PM 5 ಅನಿಸಿಕೆಗಳು  ಬರೆಯೋದನ್ನ ಮರೆಯುತ್ತಿದ್ದೀವಾ?

ಮೊನ್ನೆ ಅಮ್ಮ ಅಂಗಡಿಯಿಂದ ಸಾಮನು ತರಕ್ಕೆ ಪಟ್ಟಿ ಬರೆಯಕ್ಕೆ ಹೇಳಿದರು. ಒಂದು ಪುಟ ಬರ್ವೆಯುವಷ್ಟ್ರಲ್ಲಿಯೇ ಕೈ ಬೆರಳು, ಮೊಣಕೈ ಎಲ್ಲ ನೋವು ಶುರು. ಪೆನ್ ಕೈಲಿ ಹಿಡಿದು ಬಹಳ ದಿನಗಳೇ ಆಗಿದ್ದವು. ಈ ಕಂಪ್ಯೂಟರ್ ಕಾಲದಲ್ಲಿ ನಾವು ಬರೆಯುವುದನ್ನ ಮರೆಯುತ್ತಿದ್ದೀವಾ?

ಮೊದಲಾದರೆ ಕಾಗದ ಬರೆಯೊ ರೂಢಿ ಇತ್ತು. ಟೆಲಿಫೋನ್ ಬಂತು, ಕಾಗದ ಬರೆಯೋ ರೂಡಿ ಹೋಯ್ತು. ಈಗ ಪೆನ್ ಹಿಡಿಯೋದು ಶಾಲೆ-ಕಾಲೇಜಲ್ಲಷ್ಟೆ. ಓದಿ ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಈ internet, ಈ-ಮೈಲ್ ಬಂತು. ಈಗೇನಿದ್ರು ಪತ್ರ ಕುಟ್ಟೀ send ಕ್ಲಿಕ್ ಮಾಡೋದಷ್ಟೆ.

ನೀವು ಪೆನ್ ಹಿಡಿದು ಕಾಗದ ಬರೆದು ಎಷ್ಟು ದಿನ ಆಯ್ತು? ಬಹಳ ದಿನಗಳಾಗಿದ್ರೆ ಯಾಕೆ ತಡ, ನನ್ನ ವಿಳಾಸ ಕೊಡ್ತೀನಿ. ಒಂದು ಪತ್ರ ಹಾಕಿ :)

ಟಿಪ್ಪಣಿ: ನಿಮ್ಮ ಪತ್ರಕ್ಕೆ ಮರೀದೆ ಉತ್ತರಿಸ್ತೀನಿ ;)

Posted by Prashanth M 4:20 PM 3 ಅನಿಸಿಕೆಗಳು  ಮೊದಲ ಮಾತು

ಎಲ್ಲರಿಗೂ ನಮಸ್ಕಾರ ಹಾಗು ಮಾತು-ಕಥೆಗೆ ಸ್ವಾಗತ,

ಹೆಸರೇ ಹೇಳುವಂತೆ ಇಲ್ಲಿ ಬರೀ ಮಾತು-ಕಥೆ, ಕಾಡು ಹರಟೆ, ತಲೆ ಹರಟೆ, ಅನಿಸಿಕೆ-ಅನುಭವಗಳು, ಮನದಾಳದ ಭಾವನೆಗಳು, ಇತ್ಯಾದಿ ಇತ್ಯಾದಿ ಗೆ ಸ್ಥಳ.

ಬನ್ನಿ ಎಲ್ಲರೂ ಮಾತು-ಕಥೆಗೆ, ಕೂತು ಹರಟೋಣ.

Posted by Prashanth M 3:37 PM 3 ಅನಿಸಿಕೆಗಳು