ನೂರು ಸಾವಿರ ಸಾವಿನ ನೆನಪು

"ಬರಲಿರುವ ನಾಳೆಗಳಲ್ಲಿ ನಿನ್ನೆಗಳ ಹುಡುಕಿ ಹೋಗುವ ತುಡಿತವಿತ್ತು. ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡುವ ತವಕವಿತ್ತು."

"ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, 'ಅಹಿಂಸೆಯೇ ಪರಮ ಧರ್ಮ' ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು."

"ನನಗೊಂದು ಉತ್ತರ ಬೇಕು. ಈ ಹುಡುಕಾಟದ ಕೊನೆ ದುರಂತವಿರಲಿ, ಸುಖಾಂತವಿರಲಿ, ನನಗಿದಕ್ಕೊಂದು ಮುಕ್ತಾಯಬೇಕು."

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ. ಅವರು ಬರೆದದ್ದೇ ಇತಿಹಾಸವಾಗುತ್ತದೆ."

"ಮಂದಿರಗಳು ಉರುಳುತ್ತವೆ, ಮತ್ತೆ ಎದ್ದು ನಿಲ್ಲುತ್ತವೆ. ಒಡೆದ ಹೃದಯಗಳು... ??"

ಹಿಟ್ಲರನ ನಾಜಿಗಳಿಂದ ತಪ್ಪಿಸಿಕೊಂಡು ತಂದೆಯ ಜೊತೆ ಬೆಂಗಳೂರಿಗೆ ಬಂದ ಹ್ಯಾನಾ, ಅನಿತಾಳಾಗಿ, ಆರು ದಶಕಗಳ ಕಾಲ ಭಾರತೀಯಳಂತೆ ಬಾಳಿ; ತನ್ನ ತಾಯಿ, ಅಕ್ಕ, ತಮ್ಮಂದಿರ ಹುಡುಕಿಕೊಂಡು ಹೊರಟ ಯಹೂದಿಯ ಕಥೆ. ತನ್ನವರ ಕಥೆಯ ಹುಡುಕ ಹೊರಟ ಅನಿತಾಳ ಮುಂದೆ ಬೆತ್ತಲಾಗಿ ನಿಲ್ಲುವ ಸಾವಿರಾರು ಯಹೂದಿಗಳ ದಾರುಣ ಕಥೆಯೇ ನೇಮಿಚಂದ್ರರ ’ಯಾದ್ ವಶೇಮ್’ ಪುಸ್ತಕ.

ಇತಿಹಾಸವೆಂದರೆ ಮೂಗು ಮುರಿಯುತ್ತಿದ್ದ ನನ್ನಲ್ಲೂ ಆಸಕ್ತಿ ಮೂಡಿಸಿದ ಪುಸ್ತಕ ಓದಿಸಿಕೊಂದು ಹೋಗುತ್ತದೆ. ದ್ವಿತೀಯ ಮಹಾಯುದ್ಧದ ಸಮಯದ ನೈಜ ವ್ಯಕ್ತಿಗಳು-ಘಟನೆಗಳು, ಅಂಕಿ ಅಂಶಗಳು, ಜೊತೆಗೆ ಸೇರಿಸಿದ ಒಂದು ಕಾಲ್ಪನಾತ್ಮಿಕ ಯಹೂದಿಯ ಕಥೆಯ ಸಮ್ಮಿಲನ. ಪ್ರವಾಸ ಕಥನ, ಇತಿಹಾಸ, ಜೀವನ ಚರಿತ್ರೆ, ಹಳೆಯ ಬೆಂಗಳೂರಿನ ಪರಿಚಯ - ಇವುಗಳೆಲ್ಲದರ ಸಮಮಿಶ್ರಣವೇ ’ಯಾದ್ ವಶೇಮ್’.

ಬಹಳ ದಿನಗಳ ನಂತರ ಒಂದು ಒಳ್ಳೆಯ ಪುಸ್ತಕ ಓದಿ ಖುಷಿಯಾಯಿತು. ತಪ್ಪದೆ ಓದಿ, ನೂರು ಸಾವಿರ ಸಾವಿನ ಕಥೆಯನ್ನ.

Posted by Prashanth M 5:15 AM 1 ಅನಿಸಿಕೆಗಳು  



ಮತ್ತೆ ಬಂದಿದೆ ಯುಗಾದಿ...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಬೇಂದ್ರೆಯವರ ಈ ಸಾಲುಗಳು ಕಿವಿಗೆ ಬೀಳದೆ ಬೆಳಗಾಗದ ಯುಗಾದಿ ಹಬ್ಬದ ದಿನವೇ ಇಲ್ಲ. ಪರೀಕ್ಷೆಗೂ ಸಹ ಬೆಳಗ್ಗೆ ಬೇಗ ಏಳದವನು, ಈ ದಿನದಂದು ಎದ್ದು ಕುಳಿತು ಬಕಪಕ್ಷಿಯಂತೆ ಈ ಹಾಡನ್ನು ರೇಡಿಯೋದಲ್ಲಿ ಬರುವ ತನಕ ಅಲ್ಲಾಡದಂತೆ ಕೂರಲಿಲ್ಲವೆಂದರೆ ಯುಗಾದಿ ಶುರುವಾಗುತ್ತಲೇ ಇರಲಿಲ್ಲ. ಹಾಡು ಕೇಳಿ, ಮುಗಿಯುವ ತನಕ ಕೊನೆಸಾಲಿನವರೆಗೂ ಜೊತೆಗೆ ಹಾಡಿದ ನಂತರವೇ ಎಣ್ಣೆ ಸ್ನಾನದ ತಯಾರಿ.

ಕುಲವಧು ಚಿತ್ರದ ಹಾಡು, ಮಾವಿನ ತೋರಣ, ಅಭ್ಯಂಜನ, ಬೇವು-ಬೆಲ್ಲ, ಬೇಳೆ ಒಬ್ಬಟ್ಟು - ಇಷ್ಟರಲ್ಲಿ ಯಾವುದೂ ತಪ್ಪುವಂತಿಲ್ಲ. ಪ್ರತಿ ವರ್ಷ ಹೋಳಿಗೆ ತಯಾರಿ ಮತ್ತು ತಿನ್ನುವಾಗ ’ಹೋಳಿಗೆ ಮಾಮ’ನ ಪ್ರಸಂಗವನ್ನು ನೆನೆಯಲೇ ಬೇಕು, ಅದೂ ಕೂಡ ತಪ್ಪುವಂತಿಲ್ಲ. ’ಹೋಳಿಗೆ ಮಾಮ’, ಅವರ ನಿಜವಾದ ಹೆಸರಲ್ಲ. ಅವರ ಹೆಸರೂ ನನಗೆ ಗೊತ್ತಿಲ್ಲ. ನನ್ನ ತಂದೆಯ ಬಳಗದವರು (ಸರಿಯಾದ ಸಂಬಂಧ ನೆನಪಿಲ್ಲ). ಸುಮಾರು ವರ್ಷಗಳ ಹಿಂದಿನ ಮಾತು (೩೦-೩೫ ವರ್ಷಗಳ ಹಿಂದಿನದು), ಪ್ರತಿ ವರ್ಷದಂತೆ ಯುಗಾದಿ ಬಂತು. ’ಹೋಳಿಗೆ ಮಾಮ’ ಆಗ ಮೇಟ್ರಿಕ್ಸ್ ವಿದ್ಯಾರ್ಥಿ. ತುಮಕೂರಿನಲ್ಲಿ ಹಾಸ್ಟೆಲ್‍ನಲ್ಲಿದ್ದುಕೊಂಡು ಓದುತ್ತಿದ್ದರು. ಪರೀಕ್ಷೆ ಹಿಂದಿನ ದಿನವೇ ಯುಗಾದಿ. ಛೇ! ಹೋಳಿಗೆ ತಿನ್ನದೆ ಪರೀಕ್ಷೆ ಬರೆಯುವುದಾದರೂ ಹೇಗೆ? ಸರಿ, ಹತ್ತಿರದಲ್ಲೇ ಇದ್ದ ಊರಿನ ದಾರಿ ಹಿಡಿದರು. ಹಬ್ಬದ ದಿನ ಒಬ್ಬಟ್ಟು ಸೊಗಸಾಗಿತ್ತು, ಹೊಟ್ಟೆ ಬಿರಿಯೆ ತಿಂದರು. ಮಾರನೆ ದಿನ ಹೊಟ್ಟೆಯ ತಕರಾರು ಶುರು, ದಿನವಿಡೀ ಹಿತ್ತಲ ಕಡೆಯ ದಾರಿ ಸವೆಸಿದ್ದೇ ಆಯಿತು. ಜೊತೆಗೆ ಮೆಟ್ರಿಕ್ಸ್ ಗೆ ಕೈ ಮುಗಿದ್ದದ್ದೂ ಆಯಿತು. ಅಂದಿನಿಂದ ಅವರ ಹೆಸರು ’ಹೋಳಿಗೆ’ ಆಯಿತು. ಕೊನೆಗೆ ಅವರಿಗಿಂತ ಚಿಕ್ಕವರ ಬಾಯಲ್ಲಿ ’ಹೋಳಿಗೆ ಮಾಮ’.

ಇಂದು ಯುಗಾದಿ. ಈ ಬಾರಿ ಎಂದಿನ ಸಡಗರ-ಸಂಭ್ರಮಗಳಿಂದ ಸಾವಿರಾರು ಮೈಲಿ ದೂರದಲ್ಲಿ ಕುಳಿತು ಹಿಂದಿನ ದಿನಗಳ ಮೆಲುಕು ಹಾಕುತ್ತಲೆ ಹಬ್ಬದ ಅಚರಣೆ. ಹಾಡನ್ನು ಗುನುಗುನಿಸುತ್ತ, ಹೋಳಿಗೆ ನೆನದು ನೀರೂರಿಸುತ್ತಾ ದಿನ ದೂಡುವುದು...

ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ :)

ಎಲ್ಲರಿಗೂ ಯುಗಾದಿಯ ಶುಭಾಶಯಗಳು

ಕೊಸರು: ಹಾಡಿನ ಸಾಹಿತ್ಯ ಬೇಕಿದ್ದರೆ ಇಲ್ಲಿ ಇಣುಕಿ. ಹಾಡು ಕೇಳಲಿಕ್ಕೆ/ನೋಡಲಿಕ್ಕೆ ಯುಟ್ಯೂಬ್‍ಗೆ ಧಾವಿಸಿ.

Posted by Prashanth M 2:01 AM 1 ಅನಿಸಿಕೆಗಳು  



ಕಂಡಿದ್ದು ಕೇಳಿದ್ದು ೪

ವಿಜಯನಗರದ ಬಳಿ ಮಾಗಡಿ ರಸ್ತೆಯಲ್ಲಿ ಆಟೋ ಹಿಂದೆ ಕಂಡು ಬಂದ ಸಾಲುಗಳು -

ಹುಡುಗನ ನೆನಪು ಫಿಟ್ಸ್ ತರಹ, ಬರುತ್ತೆ ಹೋಗುತ್ತೆ
ಹುಡುಗಿ ನೆನಪು ಏಡ್ಸ್ ತರಹ, ಬಂದರೆ ಹೋಗಲ್ಲ

:)

Posted by Prashanth M 11:32 AM 0 ಅನಿಸಿಕೆಗಳು  



ಕೇರಳದಲ್ಲಿ ಸರ್ವಜ್ಞ

ಸ್ಥಳ: ಕಾಸರಗೋಡು ಜಿಲ್ಲೆಯ ಮದೂರಿನ ಮದನಾಂತೇಶ್ವರ ದೇವಾಲಯದ ಅಂಗಳ.

ತಿಂಗಳ ಹಿಂದೆ ಹೀಗೇ ಸುತ್ತಾಡುತ್ತ ಬೇಲೂರು, ಶೃಂಗೇರಿ, ಆಗುಂಬೆ, ಉಡುಪಿ, ಮಂಗಳೂರಿನ ಮೂಲಕ ಕಾಸರಗೋಡು ತಲುಪಿದೆವು. ಬೆಂಗಳೂರಿನಲ್ಲೇ ಕನ್ನಡ ಸೊರಗುತ್ತಿರುವಾಗ ಹೊರನಾಡಿನಲ್ಲಿ ಕನ್ನಡ ಕಂಡು ಖುಷಿಯಾಯಿತು. ಅದರಲ್ಲೂ ಮದನಾಂತೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸರ್ವಜ್ನರ ತ್ರಿಪದಿಗಳನ್ನು ಕಂಡು ಮತ್ತಷ್ಟು ಸಂತೋಷವಾಯಿತು.

Posted by Prashanth M 10:33 PM 1 ಅನಿಸಿಕೆಗಳು