ನೂರು ಸಾವಿರ ಸಾವಿನ ನೆನಪು

"ಬರಲಿರುವ ನಾಳೆಗಳಲ್ಲಿ ನಿನ್ನೆಗಳ ಹುಡುಕಿ ಹೋಗುವ ತುಡಿತವಿತ್ತು. ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡುವ ತವಕವಿತ್ತು."

"ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, 'ಅಹಿಂಸೆಯೇ ಪರಮ ಧರ್ಮ' ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು."

"ನನಗೊಂದು ಉತ್ತರ ಬೇಕು. ಈ ಹುಡುಕಾಟದ ಕೊನೆ ದುರಂತವಿರಲಿ, ಸುಖಾಂತವಿರಲಿ, ನನಗಿದಕ್ಕೊಂದು ಮುಕ್ತಾಯಬೇಕು."

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ. ಅವರು ಬರೆದದ್ದೇ ಇತಿಹಾಸವಾಗುತ್ತದೆ."

"ಮಂದಿರಗಳು ಉರುಳುತ್ತವೆ, ಮತ್ತೆ ಎದ್ದು ನಿಲ್ಲುತ್ತವೆ. ಒಡೆದ ಹೃದಯಗಳು... ??"

ಹಿಟ್ಲರನ ನಾಜಿಗಳಿಂದ ತಪ್ಪಿಸಿಕೊಂಡು ತಂದೆಯ ಜೊತೆ ಬೆಂಗಳೂರಿಗೆ ಬಂದ ಹ್ಯಾನಾ, ಅನಿತಾಳಾಗಿ, ಆರು ದಶಕಗಳ ಕಾಲ ಭಾರತೀಯಳಂತೆ ಬಾಳಿ; ತನ್ನ ತಾಯಿ, ಅಕ್ಕ, ತಮ್ಮಂದಿರ ಹುಡುಕಿಕೊಂಡು ಹೊರಟ ಯಹೂದಿಯ ಕಥೆ. ತನ್ನವರ ಕಥೆಯ ಹುಡುಕ ಹೊರಟ ಅನಿತಾಳ ಮುಂದೆ ಬೆತ್ತಲಾಗಿ ನಿಲ್ಲುವ ಸಾವಿರಾರು ಯಹೂದಿಗಳ ದಾರುಣ ಕಥೆಯೇ ನೇಮಿಚಂದ್ರರ ’ಯಾದ್ ವಶೇಮ್’ ಪುಸ್ತಕ.

ಇತಿಹಾಸವೆಂದರೆ ಮೂಗು ಮುರಿಯುತ್ತಿದ್ದ ನನ್ನಲ್ಲೂ ಆಸಕ್ತಿ ಮೂಡಿಸಿದ ಪುಸ್ತಕ ಓದಿಸಿಕೊಂದು ಹೋಗುತ್ತದೆ. ದ್ವಿತೀಯ ಮಹಾಯುದ್ಧದ ಸಮಯದ ನೈಜ ವ್ಯಕ್ತಿಗಳು-ಘಟನೆಗಳು, ಅಂಕಿ ಅಂಶಗಳು, ಜೊತೆಗೆ ಸೇರಿಸಿದ ಒಂದು ಕಾಲ್ಪನಾತ್ಮಿಕ ಯಹೂದಿಯ ಕಥೆಯ ಸಮ್ಮಿಲನ. ಪ್ರವಾಸ ಕಥನ, ಇತಿಹಾಸ, ಜೀವನ ಚರಿತ್ರೆ, ಹಳೆಯ ಬೆಂಗಳೂರಿನ ಪರಿಚಯ - ಇವುಗಳೆಲ್ಲದರ ಸಮಮಿಶ್ರಣವೇ ’ಯಾದ್ ವಶೇಮ್’.

ಬಹಳ ದಿನಗಳ ನಂತರ ಒಂದು ಒಳ್ಳೆಯ ಪುಸ್ತಕ ಓದಿ ಖುಷಿಯಾಯಿತು. ತಪ್ಪದೆ ಓದಿ, ನೂರು ಸಾವಿರ ಸಾವಿನ ಕಥೆಯನ್ನ.

Posted by Prashanth M 5:15 AM 1 ಅನಿಸಿಕೆಗಳು